ಇಬ್ರಾಹಿಂಖಾನ್ ಲೋದಿ-	
	ದೆಹಲಿಯ ಲೋದಿ ಸುಲ್ತಾನರಲ್ಲಿ ಕೊನೆಯವ. ಇವನು 1517ರಲ್ಲಿ ಸಿಂಹಾಸನವನ್ನೇರಿದ. ವಿವೇಕಿಯೂ ಸಮರ್ಥನೂ ಆಗಿದ್ದ ಸುಲ್ತಾನ್ ಸಿಕಂದರ್ ಷಾ ಈತನ ತಂದೆ. ಆದರೆ ಈತ ಅವಿವೇಕಿ, ದುಡುಕು ಸ್ವಭಾವದವ. ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಇವನು ಪ್ರಬಲರಾದ ಶ್ರೀಮಂತ ಆಡಳಿತ ವರ್ಗದವರನ್ನೇ ಕೆಣಕಿದ; ಫಾರ್ಮುಲಿ, ಲೋದಿ, ಲೊಹಾನಿ ಮನೆತನಗಳನ್ನು ಹತ್ತಿಕ್ಕಲೆತ್ನಿಸಿದ. ಇದರಿಂದ ಈ ಜನರೆಲ್ಲ ಈತನ ವಿರೋಧಿಗಳಾದರು. ಇವರನ್ನಡಗಿಸಲು ಈತ ದಿನೇ ದಿನೇ ಹೆಚ್ಚು ಹೆಚ್ಚು ಉಗ್ರ ಕ್ರಮಗಳನ್ನು ಕೈಕೊಂಡ. ಇಬ್ರಾಹಿಮನ ದಮನನೀತಿ ದುರಾಡಳಿತಗಳಿಗೆ ಪಂಜಾಬಿನ ದೌಲತ್‍ಖಾನ್, ಆಲಂಖಾನ್ ಮುಂತಾದವರು ರೋಸಿ ಹೋದರು; ಕಾಬೂಲನ್ನು ಸ್ವಾಧೀನಪಡಿಸಿಕೊಂಡು ದೆಹಲಿಯ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ಬಾಬರನ ಸಹಾಯ ಬೇಡಿದರು. ಹಿಂದೂಸ್ತಾನಕ್ಕೆ ನುಗ್ಗುವ ಹಂಚಿಕೆಯಲ್ಲಿ ಬಾಬರ್ ಇವರ ಆಹ್ವಾನವನ್ನು ಸಂತೋಷದಿಂದ ಮನ್ನಿಸಿದ. ವಾಯುವ್ಯದ ಕಣಿವೆಗಳನ್ನು ದಾಟಿ 19524ರಲ್ಲಿ ಸೈನ್ಯದೊಡನೆ ಲಾಹೋರಿನಲ್ಲಿ ಬಂದಿಳಿದ. ಅವನನ್ನು ಸ್ವಾಗತಿಸಿದ್ದ ಶ್ರೀಮಂತರಿಗೆ ಅವನ ಉದ್ದೇಶವೇನೆಂಬುದು ಆಗ ಅರ್ಥವಾಯಿತು. ಅವರು ಬಾಬರನ ಮೇಲೆ ತಿರುಗಿ ಬಿದ್ದರು. ದೆಹಲಿಯ ರಾಜ್ಯ ಗೆಲ್ಲಲು ಹೆಚ್ಚು ಸಿದ್ಧತೆ ಬೇಕೆಂಬುದನ್ನು ಮನಗಂಡು ಬಾಬರ್ ಕಾಬೂಲಿಗೆ ಹಿಂತಿರುಗಿದ. ಆವಶ್ಯಕವಾದ ಸಿದ್ಧತೆ ಮಾಡಿಕೊಳ್ಳಲು ಒಂದು ವರ್ಷ ಹಿಡಿಯಿತು. 1525ರ ನವೆಂಬರ್‍ನಲ್ಲಿ ಪಂಜಾಬನ್ನು ಸ್ವಾಧೀನಪಡಿಸಿಕೊಂಡ. ಅಲ್ಲಿಂದ ದೆಹಲಿಯ ಕಡೆಗೆ ನುಗ್ಗಿದ. 1526ರ ಏಪ್ರಿಲ್ 21ರಂದು ಪಾಣಿಪತ್‍ನಲ್ಲಿ ಕಾಳಗ ನಡೆಯಿತು. ಇಬ್ರಾಹಿಂ ಸೋತು ಯುದ್ಧರಂಗದಲ್ಲಿ ಮಡಿದ. ಅಲ್ಲಿಗೆ ದೆಹಲಿ ಸುಲ್ತಾನರ ಆಳ್ವಿಕೆ ಕೊನೆಗಂಡಿತು. ಮೊಗಲ್ ಸಾಮ್ರಾಜ್ಯ ಅಂದು ಜನ್ಮತಾಳಿತು. (ನೋಡಿ-ದೆಹಲಿಯ-ಸುಲ್ತಾನರು).				 
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ